ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಕಳವು

 ಸ್ವತ್ತುಗಳ ಮೇಲಿನ ಅಪರಾಧಗಳಲ್ಲೊಂದು (ತೆಫ್ಟ್), ಸುಲಿಗೆ (ಎಕ್ಸ್‍ಟಾರ್ಷನ್), ದರೋಡೆ (ರಾಬರಿ), ಡಕಾಯಿತಿ (ಡಕಾಯ್ಟಿ), ಸ್ವತ್ತಿನ ದುರುಪಯೋಗದ ಅಪರಾಧ (ಕ್ರಿಮಿನಲ್ ಮಿಸ್ ಅಪ್ರೋಪ್ರಿಯೇಷನ್ ಆಫ್ ಪ್ರಾಪರ್ಟಿ), ನಂಬಿಕೆ ದ್ರೋಹ (ಕ್ರಿಮಿನಲ್ ಬ್ರೀಚ್ ಆಫ್ ಟ್ರಸ್ಟ್), ಕಳುವಾದ ಸ್ವತ್ತಿನ ಸ್ವೀಕಾರ, ಮೋಸ (ಚೀಟಿಂಗ್), ವಂಚನೆಯ ಕೃತ್ಯಗಳು (ಫ್ರಾಡ್ಯುಲೆಂಟ್ ಡೀಡ್ಸ್), ಕೇಡು (ಮಿಸ್ಚಿಫ್), ತಕ್ಸೀರಾಗುವಂಥ ಅತಿಕ್ರಮಣ (ಕ್ರಿಮಿನಲ್ ಟ್ರೆಸ್‍ಪಾಸ್) - ಇವು ಭಾರತೀಯ ದಂಡಸಂಹಿತೆಯ 17ನೆಯ ಪರಿಚ್ಛೇದದಲ್ಲಿ ನಮೂದಿಸಿರುವ ಇತರ ಅಪರಾಧಗಳು.

 ಯಾವುದಾದರೂ ಚಿರಸ್ವತ್ತನ್ನು ಯಾವ ವ್ಯಕ್ತಿಯ ಸ್ವಾಧೀನದಿಂದಲಾದರೂ ಆ ವ್ಯಕ್ತಿಯ ಸಮ್ಮತಿಯಿಲ್ಲದೆ ಅಪ್ರಾಮಾಣಿಕತೆಯಿಂದ ತೆಗೆದುಕೊಳ್ಳುವ ಆಶಯ ಹೊಂದಿ ಆ ರೀತಿ ತೆಗೆದುಕೊಳ್ಳಲು ಆ ಸ್ವತ್ತನ್ನು ಯಾರಾದರೂ ಚಾಲಿಸಿದರೆ ಆ ವ್ಯಕ್ತಿ ಕಳವು ಮಾಡಿದನೆಂದು ಹೇಳಲಾಗುವುದು - ಎಂಬುದು ಭಾರತೀಯ ದಂಡಸಂಹಿತೆಯ 378ನೆಯ ಕಲಂ ಹೇಳುತ್ತದೆ. ಒಂದು ವಸ್ತು ನೆಲಕ್ಕೆ ಸೇರಿಕೊಂಡಿರುವಾಗ ಚರ ಸ್ವತ್ತಲ್ಲವಾದ್ದರಿಂದ ಅದು ಕಳವಿಗೆ ಈಡಲ್ಲ. ಆದರೆ ಅದನ್ನು ನೆಲದಿಂದ ಬೇರ್ಪಡಿಸಿದ ಒಡನೆಯೇ ಕಳವಿಗೆ ಈಡಾಗುವಂತಾಗುತ್ತದೆ. ನೆಲದಿಂದ ಬೇರ್ಪಡಿಸುವ ಕೃತ್ಯವೇ ಕದಲಿಕೆಯನ್ನೂ ಆಗಮಾಡಿಸಿದರೆ ಅದು ಕಳವು. ಒಬ್ಬ ಒಂದು ಸ್ವತ್ತನ್ನು ಚಲಿಸಲು ಇರುವ ತೊಡಕನ್ನು ತೆಗೆದರೆ, ಅಥವಾ ಅದನ್ನು ಇನ್ನೊಂದರಿಂದ ಬೇರ್ಪಡಿಸಿದರೆ ಮತ್ತು ವಾಸ್ತವವಾಗಿ ಚಾಲಿಸಿದರೆ ಆ ಸ್ವತ್ತು ಚಲಿಸಲು ಆತ ಕಾರಣವೆಂದು ತಿಳಿಯಬೇಕು. ಒಂದು ಪ್ರಾಣಿ ಚಲಿಸಲು ಯಾವುದಾದರೂ ಕೃತ್ಯದಿಂದ ಕಾರಣನಾದಾತ ಆ ಪ್ರಾಣಿಯನ್ನು ಆ ಕೃತ್ಯದಿಂದ ಚಾಲಿಸಿದನೆಂದೇ ತಿಳಿಯತಕ್ಕದ್ದು. ಮತ್ತು ಆ ರೀತಿ ಚಲನೆಗೆ ಕಾರಣವಾದದ್ದರ ಫನವಾಗಿ ಆ ಪ್ರಾಣಿ ಏನನ್ನು ಚಾಲಿಸುವುದೋ ಅದನ್ನೆಲ್ಲ ಆ ವ್ಯಕ್ತಿ ಚಾಲಿಸಿದನೆಂದೇ ಆಗುತ್ತದೆ. ಇವೆಲ್ಲ ವಿವರಣೆಗಳನ್ನೂ ಭಾರತೀಯ ದಂಡಸಂಹಿತೆಯಲ್ಲಿ ಕೊಡಲಾಗಿದೆ.

 ಮೇಲೆ ಹೇಳಿದ ಕಳವಿನ ವ್ಯಾಖ್ಯೆಯಲ್ಲಿ ಐದು ಮುಖ್ಯ ಅಂಶಗಳು ಅಡಕವಾಗಿವೆ:

 1. ಸ್ವತ್ತನ್ನು ವಂಚನೆಯಿಂದ ತೆಗೆದುಕೊಳ್ಳುವ ಇಚ್ಛೆ. ಇದು ಅಪರಾಧದ ತಿರುಳು. ಒಬ್ಬನಿಗೆ ದುರ್ಲಭ್ಯ. ಮತ್ತು ಇನ್ನೊಬ್ಬನಿಗೆ ದುವ್ರ್ಯಯ ಮಾಡುವ ಇಚ್ಛೆಯಿಂದ ಒಂದು ಕಾರ್ಯವನ್ನು ಮಾಡಿದರೆ ವಂಚನೆಯಿಂದ ತೆಗೆದುಕೊಳ್ಳುವ ಇಚ್ಛೆ ಪ್ರಕಟವಾಗುತ್ತದೆ. ಒಬ್ಬ ಅಜಾಗರೂಕತೆಯಿಂದ ಅಥವಾ ಅನುದ್ದೇಶಪೂರ್ವಕವಾಗಿ ಇನ್ನೊಬ್ಬನ ವಸ್ತುವನ್ನು ಕೊಂಡುಹೋದರೆ ಅಲ್ಲಿ ವಂಚನೆಯ ಆಶಯ ಇಲ್ಲದುದರಿಂದ ಕಳವಿನ ತಪ್ಪು ಬರುವುದಿಲ್ಲ. ಸ್ವತ್ತನ್ನು ಚಾಲಿಸುವ ಸಮಯದಲ್ಲಿ ವಂಚನೆಯಿಂದ ತೆಗೆದುಕೊಳ್ಳುವ ಆಶಯ ಇದ್ದರೆ ಅದು ಕಳುವಾಗುತ್ತದೆ. ಅದನ್ನು ತೆಗೆದುಕೊಂಡವನಿಗೆ ತೆಗೆದುಕೊಂಡುದರಿಂದಾಗಿ ಲಾಭವಾಗಬೇಕಾದ ಪ್ರಮೇಯವಿಲ್ಲ. ಆ ವಸ್ತುವನ್ನು ಚಿರಕಾಲ ಇಟ್ಟುಕೊಳ್ಳಬೇಕೆಂಬ ಇಚ್ಛೆ ಇರಬೇಕೆಂದಿಲ್ಲ. ಹಕ್ಕುದಾರಿಕೆಯ ನ್ಯಾಯವಾದ ವ್ಯಾಜ್ಯದಿಂದ ವಿಚಾರಗಳ ಅಥವಾ ಕಾನೂನಿನ ತಪ್ಪು ತಿಳುವಳಿಕೆಯಿಂದ ಸ್ವತ್ತನ್ನು ಕೊಂಡುಹೋದರೂ ಕಳವಾಗಲಾರದು. ತನ್ನ ಸ್ವತ್ತಾದರೂ ಅದು ಇನ್ನೊಬ್ಬನ ಸ್ವಾಧೀನವಿದ್ದು ಅದನ್ನು ವಂಚನೆಯ ಆಶಯದಿಂದ ತೆಗೆದುಕೊಂಡರೆ ಆ ಕೃತ್ಯ ಕಳುವಾಗುತ್ತದೆ. ಯಜಮಾನನ ವಂಚನೆಯ ಇಚ್ಛೆಯ ಮನವರಿಕೆ ಇಲ್ಲದಿದ್ದು ಯಜಮಾನನ ಹೇಳಿಕೆಯ ಮೇಲೆ ನೌಕರ ಸ್ವತ್ತನ್ನು ತೆಗೆದುಕೊಂಡರೆ ಅವನ ಮೇಲೆ ತಪ್ಪು ಬರುವುದಿಲ್ಲ.

 2. ಸ್ವತ್ತು ಚರವಾಗಿರಬೇಕು. ನೆಲಕ್ಕೆ ಸೇರಿಕೊಂಡಿದ್ದ ವಸ್ತುವನ್ನು ಕಿತ್ತೊಡನೆ ಅದು ಚರಸ್ವತ್ತಾಗಬಲ್ಲದು. ನೆಲದಿಂದ ಕೀಳದೆ ಮರವನ್ನು ಮಾರಿದಲ್ಲಿ ಕಳವಾಗದು. ಆದರೆ ಒಬ್ಬನಿಗೆ ಸೇರಿದ, ಬಿದ್ದ ಮರವನ್ನು ಇನ್ನೊಬ್ಬ ತೆಗೆದುಕೊಂಡು ಹೋದಲ್ಲಿ ಅದು ಕಳುವಾಗುತ್ತದೆ.

 3. ಇನ್ನೊಬ್ಬನ ಸ್ವಾಧೀನವನ್ನು ತಪ್ಪಿಸಿರಬೇಕು. ಇನ್ನೊಬ್ಬನ ಸ್ವಾಧೀನವಿದ್ದ ಸ್ವತ್ತನ್ನು ತೆಗೆದುಕೊಂಡರೆ ಮಾತ್ರ ಕಳುವಾಗುವುದು. ಕಾಡುಪಕ್ಷಿಗಳು, ಮೃಗಗಳು ಮುಂತಾದವು ಕಳವಿನ ವಸ್ತುವಾಗವು. ಆದರೆ ಸಾಕುಪ್ರಾಣಿಗಳನ್ನು ಅಪಹರಿಸಿದರೆ ಅದು ಕಳುವಾಗುತ್ತದೆ. ಒಂದು ಸ್ವತ್ತಿನ ಮೇಲೆ ಅಧಿಕಾರ ಇರುವಂತೆ ತೋರುವಂತಿದ್ದು ಆ ಮನುಷ್ಯನ ಒಪ್ಪಿಗೆಯಿಲ್ಲದೆ ಸ್ವತ್ತನ್ನು ತೆಗೆದರೆ ಕಳವು ಸಿದ್ಧವಾಗುತ್ತದೆ. ಸ್ವಾಧೀನತೆಯ ವಿವರಣೆಯನ್ನು ಕೊಡುವುದು ಬಹಳ ಕಷ್ಟ. ಬೇರೆ ಯಾರೂ ಅಭ್ಯಂತರ ಮಾಡಲಾಗದ ರೀತಿಯಲ್ಲಿ ಒಂದು ಸ್ವತ್ತಿನ ಹಕ್ಕು ಒಬ್ಬನಿಗೆ ಇದ್ದರೆ ಸ್ವತ್ತು, ಆತನ ಸ್ವಾಧೀನವೆನ್ನಬಹುದು. ಇದು ಸ್ಟೀಫನನ ಡೈಜೆಸ್ಟ್ ಆಫ್ ಕ್ರಿಮಿನಲ್ ಲಾ ದಲ್ಲಿ ಸ್ವಾಧೀನ ಪದಕ್ಕೆ ಕೊಟ್ಟ ಅರ್ಥ. ಬಹುಜನರ ಒಟ್ಟು ಸ್ವಾಧೀನತೆ ಇರುವುದನ್ನು ಇನ್ನೊಬ್ಬ ತನ್ನ ಸ್ವಂತ ಸ್ವಾಧೀನಕ್ಕೆ ತೆಗೆದುಕೊಂಡರೆ ಅವನಿಗೆ ಕಳವಿನ ತಪ್ಪು ಬರುತ್ತದೆ.

 4. ಸಮ್ಮತಿ: ಸಮ್ಮತಿಯಿಲ್ಲದೆ ಸ್ವತ್ತನ್ನು ಚಾಲಿಸಿರಬೇಕು. ಸಮ್ಮತಿ ವಾಚ್ಯವಾಗಿರಬಹುದು. ಸೂಚ್ಯವಾಗಿರಬಹುದು. ಸ್ವತ್ತಿನ ಸ್ವಾಧೀನ ಹೊಂದಿದವನೋ ಅವನಿಂದ ಅಧಿಕಾರ ಹೊಂದಿದವನೋ ಸಮ್ಮತಿ ನೀಡಿದ್ದರೆ ಆಗ ಕಳುವಾಗುವುದಿಲ್ಲ.

 5. ಚಾಲನೆ: ವಂಚನೆಯ ಇರಾದೆಯಿಂದ ಸ್ವತ್ತನ್ನು ಸ್ವಲ್ಪ ಮಾತ್ರ ಚಲಿಸಿದರೂ ಸಾಕು, ಕಳವಿನ ತಪ್ಪು ಬರುತ್ತದೆ; ತೆಗೆದುಕೊಂಡೇ ಹೋಗಬೇಕೆಂಬುದಿಲ್ಲ.

 ಇಂಗ್ಲೀಷ್ ಮತ್ತು ಭಾರತೀಯ ಕಾನೂನಿಗಳಿಗಿರುವ ವ್ಯತ್ಯಾಸ: ಇಂಗ್ಲೀಷ್ ನ್ಯಾಯದಲ್ಲಿ ಕಳವಿಗೆ ಲಾರ್ಸನಿ ಎಂಬ ಶಬ್ದವನ್ನು ಉಪಯೋಗಿಸಲಾಗುತ್ತದೆ. ಇನ್ನೊಬ್ಬನ ಸಮ್ಮತಿಯಿಲ್ಲದೆ, ಅವನಿಗೆ ಸೇರಿದ ಸ್ವತ್ತನ್ನು ಚಿರಕಾಲ ಅವನಿಗೆ ಇಲ್ಲದಂತೆ ಮಾಡಲು ಉದ್ದೇಶಪಟ್ಟು ಅನ್ಯಾಯವಾಗಿ ಕೊಂಡು ಹೋಗುವುದು ಲಾರ್ಸನಿ ಎನಿಸುತ್ತದೆ. ಅಲ್ಲಿ ಸ್ವತ್ತು ಯಾರಿಗಾದರೂ ಸೇರಿದ್ದಿರಬೇಕು. ಕಳವಿನಲ್ಲಿ ಅದು ಯಾರಾದರೊಬ್ಬರ ಸ್ವಾಧೀನತೆಯಲ್ಲಿರಬೇಕು. ಲಾರ್ಸನಿಯಲ್ಲಿ ಸ್ವತ್ತನ್ನು ತೆಗೆದುಕೊಳ್ಳುವಾಗ ಅದು ನೆಲಕ್ಕೆ ಸಂಬಂಧಿಸಿದ್ದರೆ ಅದು ತಪ್ಪಿಗೆ ಗುರಿಯಾಗಿರುವುದಿಲ್ಲ. ಕಳವಿನಲ್ಲಿ ಯಾವ ಚರಸ್ವತ್ತೂ, ಕಳವಿನ ಸ್ವತ್ತಾಗಬಹುದು. ಲಾರ್ಸನಿಯಲ್ಲಿ ತಾತ್ಕಾಲಿಕವಾಗಿ ತೆಗೆದುಕೊಳ್ಳುವ ಇಚ್ಛೆ ಆ ತಪ್ಪಿಗೆ ಆಸ್ಪದ ಕೊಡುವುದಿಲ್ಲ. ಕಳವಿನಲ್ಲಿ ತಾತ್ಕಾಲಿಕವಾಗಿ ಸ್ವತ್ತನ್ನು ತೆಗೆದುಕೊಂಡರೂ ಆ ತಪ್ಪಿಗೆ ಗುರಿ. ಲಾರ್ಸನಿಯಲ್ಲಿ ತೆಗೆದುಕೊಳ್ಳುವ ಕೆಲಸ ಒಡೆಯನ ಸಮ್ಮತಿಯಿಲ್ಲದೆ ಆಗಬೇಕು. ಕೆಲಸ ಅನ್ಯಾಯ ಮೋಸಗಳಿಂದ ಕೂಡಿರಬೇಕಲ್ಲದೆ ಯೂವುದೊಂದು ಹಕ್ಕಿನಿಂದ ವಿರಹಿತವಾಗಿರಬೇಕು. ಕಳವಿನಲ್ಲಿ ಹಾಗಲ್ಲ. ತೆಗೆದುಕೊಂಡು ಹೋಗುವುದು ಸಮ್ಮತಿಯಿಲ್ಲದೆ ಕೆಲಸವಾದರೆ ಸಾಕು. ಲಾರ್ಸನಿಯಲ್ಲಿ ಸ್ವತಿನ ಒಡೆಯನಿಗೆ ಯಾವುದಾದರೂ ಒಂದು ತೆರನಾದ ಒಡೆತನವಿರಬೇಕು. ಅದು ಒಡೆಯನ ಖಾಸಾ ಅಥವಾ ಪ್ರಲಕ್ಷಿತ (ಕನ್‍ಸ್ಟ್ರಕ್ಟಿವ್) ಸ್ವಾಧೀನತೆಯಲ್ಲಿ ಇರಬೇಕು. ಕಳವಿನಲ್ಲಿ ಸ್ವತ್ತನ್ನು ಯಾರಿಂದ ತೆಗೆದುಕೊಂಡಿದೆಯೋ ಅವನಿಗೆ ಹಕ್ಕಿರಬೇಕೆಂದಿಲ್ಲ. ಕಳವಿನ ಸ್ವತ್ತು ಕಳ್ಳನ ಅಧಿಕಾರಕ್ಕೊಳಪಟ್ಟಿತ್ತೆಂಬುದನ್ನು ರುಜುಪಡಿಸಬೇಕೆಂದಿಲ್ಲ. ಲಾರ್ಸನಿಯ ಸ್ವತ್ತನ್ನು ಚಲಿಸಿದವನು ಅಧಿಕಾರದಲ್ಲಿ ಇರದಿದ್ದಲ್ಲಿ ತಪ್ಪು ರುಜುವಾಗುವುದಿಲ್ಲ. ಭಾರತದಲ್ಲಿ ಗಂಡ ಮತ್ತು ಹೆಂಡತಿ ಬೇರೆ ಬೇರೆ ಎಂದು ತಿಳಿಯಲಾಗುವುದರಿಂದ ಒಬ್ಬರ ಸ್ವತ್ತನ್ನು ಇನ್ನೊಬ್ಬರು ಚಾಲಿಸಿದರೆ ಕಳ್ಳತನದ ತಪ್ಪಿಗೆ ಹೊಣೆಯಾಗುತ್ತಾರೆ. ಗಂಡ ಹೆಂಡತಿಯರಲ್ಲಿ ಒಬ್ಬರು ಇನ್ನೊಬ್ಬರ ಸ್ವತ್ತನ್ನು ಚಾಲಿಸಿದರೆ ಇಂಗ್ಲೀಷ್ ನ್ಯಾಯದಲ್ಲಿ ಲಾರ್ಸನಿ ತಪ್ಪಿಗೆ ಹೊಣೆಯಾಗಲಾರರು.

 ಭಾರತೀಯ ದಂಡಸಹಿತೆಯಲ್ಲಿ ಕಳವಿನ ಬೇರೆಬೇರೆ ಪ್ರಕಾರಗಳಿಗೆ ಶಿಕ್ಷೆಗಳನ್ನು ಹೇಳಿದೆ. ಮನುಷ್ಯನ ವಾಸಕ್ಕೆ ಅಥವಾ ಸ್ವತ್ತನ್ನು ಶೇಖರಿಸಲು ಇರುವ ಕಟ್ಟಡ, ಡೇರೆ, ಹಡಗು ಇವುಗಳಲ್ಲಿ ಮಾಡಿದ ಕಳವು ಸಾಮಾನ್ಯವಾದದ್ದು. ಸ್ವತ್ತಿನ ಯಜಮಾನನ ಗುಮಾಸ್ತ ಅಥವಾ ನೌಕರ ಅಥವಾ ತದ್ರೀತಿಯಲ್ಲಿ ನೇಮಿಸಲ್ಪಟ್ಟವ ಯಜಮಾನನ ಅಥವಾ ತನ್ನ ತನ್ನನ್ನು ಕೆಲಸಕ್ಕೆ ಇಟ್ಟುಕೊಂಡವನ ಸ್ವತ್ತಿನ ಬಗ್ಗೆ ಮಾಡಿದ ಕಳವು; ಕಳವು ಮಾಡಲು ಅಥವಾ ಕಳವು ಮಾಡಿದ ಬಳಿಕ ತಪ್ಪಿಸಿಕೊಂಡು ಹೋಗಲು ಅಥವಾ ಕಳವು ಮಾಡಿದ ಸ್ವತ್ತುಗಳನ್ನು ಸ್ವಾಧೀನದಲ್ಲಿರಿಸಿಕೊಳ್ಳಲು ಕೊಲ್ಲುವ, ನೋವನ್ನುಂಟುಮಾಡುವ ಅಥವಾ ಬಂಧನಕ್ಕೊಳಪಡಿಸುವ ಅಥವಾ ಅವುಗಳನ್ನು ಮಾಡಲು ಹೆದರಿಕೆ ತರುವ ನಡೆಸಿ ಮಾಡಿದ ಕಳವು-ಇವು ಕಳವಿನ ಇತರ ಬಗೆಗಳು.     *

ಕಳ್ಳ ಸ್ವತ್ತಿನ ಸ್ವೀಕಾರ: ಕಳ್ಳತನ, ಸುಲಿಗೆ, ದರೋಡೆ ಮತ್ತು ಸ್ವತ್ತಿನ ದುರುಪಯೋಗ ಅಥವಾ ನಂಬಿಕೆ ದ್ರೋಹದಿಂದ ಹಸ್ತಾಂತರದ ಅಕ್ರಮ ಭಾರತದ ಒಳಗೆ ಅಥವಾ ಹೊರಗೆ ನಡೆದರೂ ಅದು ಕಳ್ಳಸ್ವತ್ತೇ. ಆದರೆ ಆ ಸ್ವತ್ತು ತನ್ನ ಸ್ವಾಧೀನದಲ್ಲಿರಲು ಕಾನೂನು ಪ್ರಕಾರ ಅರ್ಹನಾದವನ ವಶಕ್ಕೆ ಬಂದಲ್ಲಿ ಆಮೇಲೆ ಅದು ಕಳ್ಳ ಸ್ವತ್ತು ಆಗುವುದಿಲ್ಲ. ಕಳ್ಳ ಸ್ವತ್ತು ಎಂದು ತಿಳಿದು ಅಥವಾ ಕಳ್ಳತನಕ್ಕೆ ಸೇರದೆಂದು ತಿಳಿಸಲು ಸಕಾರಣವಾಗಿ ಸಾಧ್ಯವಿದ್ದು ಒಬ್ಬ ಆ ಸ್ವತ್ತನ್ನು ಸ್ವೀಕರಿಸಿದಲ್ಲಿ ಆತ ಶಿಕ್ಷಾರ್ಹನಾಗುತ್ತಾನೆ. ಅದು ಡಕಾಯಿತಿಯಿಂದ ಪಡೆದ ಸ್ವತ್ತಾಗಿದ್ದರೆ ಹಾಗೆ ಸ್ವೀಕರಿಸಿದವ ಇನ್ನೂ ಹೆಚ್ಚಿನ ಶಿಕ್ಚೆಗೆ ಬಾಧ್ಯನಾಗುತ್ತಾನೆ. ಕಳ್ಳ ಸ್ವತ್ತೆಂದು ತಿಳಿದೂ ಅಥವಾ ತಿಳಿಯಲು ಆಸ್ಪದವಿದ್ದೂ ಒಬ್ಬ ಅವನ್ನು ಅಡಗಿಸಲು, ಹಸ್ತಾಂತರ ಮಾಡಲು ಅಥವಾ ತೆಗೆದುಕೊಂಡು ಹೋಗಲು ಸಹಾಯ ಮಾಡಿದರೆ ಅವನೂ ದಂಡಾರ್ಹ.         

(ಕೆ.ಜಿ.ಬಿ.)